ಬುಧವಾರ, ನವೆಂಬರ್ 25, 2015

ಲಂಬಾಣಿ ಜನಾಂಗದ ದಿಪವಾಳಿ

fgfgyfrajenndraಬಾಪು ತೋನ ಮೇರಾ
 ವರ್ಷೆ ದಾಡೇರ ಕೋಟ ದವಾಳಿ
 ಯಾರಿ ತೋನ ಮೇರಾ
 ವರ್ಷೆ ದಾಡೇರ ಕೋಟ ದವಾಳಿ
 ಭೀಯಾ ತೋನ ಮೇರಾ
 ವರ್ಷೆ ದಾಡೇರ ಕೋಟ ದವಾಳಿ...
ಅಪ್ಪ- ಅಮ್ಮ, ಸಹೋದರರ ಗುಣಗಾನ ಮಾಡಿ, ಅವರಿಗೆ ನಮಸ್ಕಾರ ಸಲ್ಲಿಸುವ ಈ ಹಾಡು ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಪ್ರತಿ ಲಂಬಾಣಿ ತಾಂಡಾದ ಪ್ರತಿ ಮನೆಮನೆಗಳಲ್ಲೂ ದೀಪಾವಳಿ ಸಮಯದಲ್ಲಿ ಕೇಳಿಬರುತ್ತದೆ. ಹಿಂದು ಧರ್ಮದ ಬಹುತೇಕ ಎಲ್ಲ ಹಬ್ಬಗಳು ಮಹಿಳೆಯರಿಗೇ ಮೀಸಲು. ಆದರೆ ದೀಪಾವಳಿ ವಿಶೇಷ ಎಂದರೆ ಲಂಬಾಣಿ ತಾಂಡಾದ ಅವಿವಾಹಿತ ಹೆಣ್ಣುಮಕ್ಕಳಿಗಷ್ಟೇ ಇದು ಸಮರ್ಪಿತವಾಗಿರುವುದು.
ಇವರಿಗೆ ದೀಪಾವಳಿ ‘ದವಾಳಿ’ ಹಬ್ಬ. ಇದರ ವಿಶೇಷತೆ ಎಂದರೆ  ಹಬ್ಬದಲ್ಲಿ ಮದುವೆಯಾದವರಿಗೆ ಹಬ್ಬದಲ್ಲಿ ಪಾಲ್ಗೊಳ್ಳುವ ಅವಕಾಶವಿಲ್ಲ. ಯುವಕರಿಗೂ ಇಲ್ಲಿ ನಿಷಿದ್ಧ. ಒಂದು ವೇಳೆ ಯುವಕರು ಭಾಗವಹಿಸಿರುವುದು ಕಂಡುಬಂದರೆ ಅವರಿಗೆ ದಂಡವನ್ನೂ ವಿಧಿಸಲಾಗುವುದು.
ದೀಪಾವಳಿ ಅಮವಾಸ್ಯೆಯ ದಿನ ಲಕ್ಷ್ಮಿ ಪೂಜೆಯ ಮೊದಲು ಗೋಪೂಜೆ ನಡೆಯುತ್ತದೆ. ಅಮವಾಸ್ಯೆಯ ರಾತ್ರಿ ಯುವತಿಯರು ಸಿಂಗರಿಸಿಕೊಂಡು ಹರಳೆಣ್ಣೆ ದೀಪದ ಆರತಿಗಳನ್ನು ಹಚ್ಚಿಕೊಂಡು ತಾಂಡಾದ ನಾಯಕನ ಮನೆಗೆ ಹೋಗಿ ಆರತಿ ಬೆಳಗುತ್ತಾರೆ. ಆರತಿ ಢಾಕಣಿ (ಪಣತಿ)ಯಲ್ಲಿ ಎಲ್ಲರೂ ಕಾಣಿಕೆಯಾಗಿ ಹಾಕುತ್ತಾರೆ.
ಬಲಿಪಾಡ್ಯಮಿ ದಿನ ಸಾಂಪ್ರದಾಯಿಕ ಬಟ್ಟೆ ತೊಟ್ಟ ಯುವತಿಯರು ಹಾಗೂ ಬಾಲಕಿಯರು ಕಾಡಿನಲ್ಲಿ ಹೊನ್ನಂಬರಿ, ಅಣ್ಣಿ ಮೊದಲಾದ ಹೂವುಗಳನ್ನು ಸಂಗ್ರಹಿಸುತ್ತಾರೆ. ದಾರಿಯುದ್ದಕ್ಕೂ ಹಾಡು ಹೇಳುತ್ತಾ ನರ್ತಿಸುತ್ತಾರೆ. ದಾರಿ ಮಧ್ಯದಲ್ಲಿ ಸಿಗುವ ದೇವಿ ದೇವಾಲಯದಲ್ಲಿ ಕೂತು ಸಿಹಿತಿಂಡಿ ತಿನ್ನುತ್ತಾರೆ. ಬುಟ್ಟಿ ತುಂಬ ಹೂ ಕಿತ್ತುಕೊಂಡು ಸಂಜೆ ವೇಳೆಗೆ ಮನೆಗೆ ಹಿಂತಿರುಗುತ್ತಾರೆ.
ಈ ದಿನ ಪೂರ್ವಿಕರಿಗೆ ಎಡೆ ಹಾಕುವ ಸಂಪ್ರದಾಯ ನಡೆಯುತ್ತದೆ. ಈ ಆಚರಣೆಗೆ ‘ದಬುಕಾರ್‌’ ಎಂದು ಹೆಸರು. ಕಾಡು ಮೇಡುಗಳಿಂದ ತಂದ ಹೂಗಳನ್ನು ಮನೆಯಲ್ಲಿ ಹರಡುತ್ತಾರೆ. ಮನೆಯಲ್ಲಿ ಕೆಂಡ ತಯಾರಿಸಿ ಹಿರಿಯರನ್ನು ನೆನೆದು ಕೆಂಡಕ್ಕೆ ಲೋಬಾನೆ, ತುಪ್ಪ, ಹಿರಿಯರಿಗೆ ಇಷ್ಟವಾದ ತಿಂಡಿ, ಅಡುಗೆ ಪದಾರ್ಥಗಳನ್ನು ಹಾಕುತ್ತಾರೆ.
ಈ ಸಂದರ್ಭದಲ್ಲಿ ನಮ್ಮ ಜೀವನಾಧಾರವಾಗಿರುವ ಗಾಳಿ, ಬೆಳಕು, ಸೂರ್ಯ, ಚಂದ್ರ, ಪ್ರಕೃತಿಗಳನ್ನು ನೆನೆದು ಪೂಜೆ ನಡೆಯುತ್ತದೆ. ಯುವತಿಯರು ಗ್ರಾಮದ ಪ್ರತೀ ಮನೆಗೂ ತೆರಳಿ ದೀಪ ಬೆಳಗಿ ಬಾಳು ಬೆಳಕಾಗಲಿ ಎಂದು ಹರಸಿ ಬರುತ್ತಾರೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿನ ಲಂಬಾಣಿ ತಾಂಡಾದವರು ಚಿಕ್ಕಮಕ್ಕಳನ್ನು ಹೂವಿನ ಬುಟ್ಟಿಯಲ್ಲಿ ಕೂಡಿಸಿ ಮೆರವಣಿಗೆ ಮಾಡುತ್ತಾರೆ.
ಗೊದ್ನು ಹಬ್ಬ ಆಚರಣೆ
 ಗ್ರಾಮದ ದೇವಸ್ಥಾನದ ಸಮೀಪದ ಜಾಗದಲ್ಲಿ ಗೊದ್ನು ಹಬ್ಬ ಆಚರಿಸಲಾಗುತ್ತದೆ. ಸಂಜೆ ಎತ್ತುಗಳ ಕೊರಳಿಗೆ ಕೊಬ್ಬರಿ ಬಟ್ಟಲು, ಹಣ ಕಟ್ಟಿ ಸಿಂಗರಿಸುತ್ತಾರೆ. ಸಾಮಾನ್ಯವಾಗಿ ಮಲೆನಾಡು ಪ್ರದೇಶಗಳಲ್ಲಿ ಮಾಡುವಂತೆ, ಈ ಎತ್ತುಗಳನ್ನು ಬೆದರಿಸಿ ಬಿಡುತ್ತಾರೆ. ಆ ಎತ್ತುಗಳ ಜೊತೆ ಸೆಣೆಸಾಟ ನಡೆಸಿ ಹಿಡಿದುಕೊಂಡು ಬಂದವರಿಗೆ ಬಹುಮಾನ ಉಂಟು.
ನೃತ್ಯದ ಸೊಬಗು
 ಇಲ್ಲಿ ಅವಿವಾಹಿತೆಯರೆಲ್ಲ ಸೇರಿ ನೃತ್ಯ ಮಾಡುವ ದೃಶ್ಯ ನೋಡುವುದೇ ಸೊಬಗು. ದೀಪಾವಳಿಯ ಬೆಳ್ಳಂಬೆಳಿಗ್ಗೆ ಈ ಯುವತಿಯರೆಲ್ಲ ಮೊದಲು ಮಡಿಯಿಂದ ಅಡುಗೆ ಮಾಡುವ ಒಲೆಗೆ ಪೂಜೆ ಸಲ್ಲಿಸುತ್ತಾರೆ. ಅಷ್ಟೊತ್ತಿಗಾಗಲೇ ಊರ ಗೌಡನ ಮಾಹಿತಿದಾರ ‘ಡಾಲ್ಯ’ ಹಲಗೆ ಬಡಿಯುತ್ತ ಊರ ತುಂಬ ಅಡ್ಡಾಡುತ್ತಾನೆ. ಇದರ ಉದ್ದೇಶ ಯುವತಿಯರೆಲ್ಲ ಹುಡುಗಿಯರು ಹಟ್ಟಿ ನಾಯಕರ ಮನೆಗೆ ಬರಬೇಕು ಎನ್ನುವುದು.
ಈ ಡಂಗುರದ ಸಂದೇಶ ಸಿಗುತ್ತಿದ್ದಂತೇ ಯುವತಿಯರು ಹಟ್ಟಿ ನಾಯಕರ ಮನೆ ಬಳಿ ಸೇರಿ ನೃತ್ಯ ಆರಂಭಿಸುತ್ತಾರೆ. ಲಂಬಾಣಿ ದಿರಿಸಿನಲ್ಲಿ ನಡೆಯುವ ಆ ನೃತ್ಯದ ಸೊಬಗು ನೋಡಿಯೇ ಅನುಭವಿಸಬೇಕು. ಮೊದಲು ಗುಂಪು ಗುಂಪಾಗಿ ನೃತ್ಯ ಆರಂಭಿಸುವ ಈ ಯುವತಿಯರು ನಂತರ ಹೊನ್ನಾರಿಕೆ ಹೂವು ಬುಟ್ಟಿಯ ಜೊತೆ ತಿರುಗುತ್ತಾ ನರ್ತಿಸುತ್ತಾರೆ. ಇದಕ್ಕೆ ಸಾಥ್‌ ನೀಡಲು ಡೋಲು ಬಾರಿಸಲಾಗುತ್ತದೆ, ಉತ್ತೇಜನ ನೀಡಲು ಪಟಾಕಿ ಸಿಡಲಾಗುತ್ತದೆ. ಈ ವೈಭವ ಸುಮಾರು ಎರಡು, ಎಡರೂವರೆ ಗಂಟೆ ನಡೆಯುತ್ತದೆ.
ನೃತ್ಯ ಮುಗಿದ ಮೇಲೆ ಹಟ್ಟಿ ಗೌಡನ ಹೆಂಡತಿ ನೇತೃತ್ವದಲ್ಲಿ ಊರ ಹಿರಿಯರು ತಾಂಡಾದ ಈ ಯುವತಿಯರನ್ನು ಬೀಳ್ಕೊಡುತ್ತಾರೆ. ಮನೆಗೆ ಬರುವ ಈ ಯುವತಿಯರು ಗ್ರಾಮದಲ್ಲಿರುವ ವಿವಿಧ ದೇವಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ನಂತರ ಸೆಗಣಿಯ (ಗೋಧಾಣಿ) ಗುರ್ಚಿ ಮಾಡಿಕೊಂಡು ಐವರು ಯುವತಿಯ ಗುಂಪು ಗ್ರಾಮದ ಪ್ರತಿ ಮನೆಗೆ ತೆರಳುತ್ತದೆ.
ಅಲ್ಲಿ ಗುರ್ಚಿ ಇಟ್ಟು ನಂತರ ಸೆಗಣಿಯನ್ನು ಒಂದೆಡೆ ಸೇರಿಸಲಾಗುತ್ತದೆ. ಸಂಜೆ  ಆ ಸೆಗಣಿಯ ಗುಂಪಿಗೆ ಹಿಟ್ಟು, ಹಾಲು ಹಾಕಲಾಗುತ್ತದೆ. ರಾತ್ರಿ ತಾಂಡಾ ಮುಖ್ಯಸ್ಥ ನಾಯಕ ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗಿಯಾಗುವ ಮೂಲಕ ಹಬ್ಬಕ್ಕೆ ಮಂಗಳ ಹಾಡಲಾಗುವುದು. ಮದುವೆ ನಿಶ್ಚಯ ಆದವರು, ಮದುವೆಗಾಗಿ ವರಾನ್ವೇಷಣೆಯಲ್ಲಿ ತೊಡಗಿದವರು ಬರುವ ದೀಪಾವಳಿ ಹಬ್ಬದಲ್ಲಿ ಪಾಲ್ಗೊಳ್ಳಲು ತಮಗೆ  ಅವಕಾಶ ಸಿಗುವುದಿಲ್ಲ ಎಂದು ನೆನೆದು ಕಣ್ಣೀರೂ ಸುರಿಸುತ್ತಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ